ಯಾಜ್ಞವಲ್ಕ್ಯ
ಒಬ್ಬ ಬ್ರಹ್ಮರ್ಷಿ. ವೈಶಂಪಾಯನ ಮಹರ್ಷಿಯ ಸೋದರಳಿಯ ಹಾಗೂ ಶಿಷ್ಯ. ತಂದೆ ಬ್ರಹ್ಮರಾತ. ವೈಶಂಪಾಯನನ ಶಿಷ್ಯರನ್ನು ತಿರಸ್ಕರಿಸಿದ್ದರಿಂದ ಯಾಜ್ಞವಲ್ಕ್ಯ ಶಾಪಕ್ಕೊಳಗಾದ. ಅವನಿಂದ ಕಲಿತ ವೇದಗಳನ್ನು ಈತ ವಮನ ಮಾಡಲು ಉಳಿದ ಮುನಿಗಳು ಅದನ್ನು ತಿತ್ತಿರಿಪಕ್ಷಿಯ ರೂಪದಿಂದ ಸ್ವೀಕರಿಸಿದರು. ಬಳಿಕ ಇವನು ಸೂರ್ಯನಿಂದ ಶುಕ್ಲಯಜುರ್ವೇದವನ್ನು ಕಲಿತ (ನೋಡಿ- ಯಜುರ್ವೇದ-ಸಂಹಿತೆ). ಈತ ಮಹಾ ವಿದ್ವಾಂಸ. ವಾದ ಮಾಡುವುದರಲ್ಲಿ ತುಂಬ ನಿಪುಣ. ಈತ ಅಪಾರ ಸಂಪತ್ತು ಮತ್ತು ಕೀರ್ತಿಯನ್ನು ಗಳಿಸಿದ್ದ. ಜನಕರಾಜನ ಯಜ್ಞಸಭೆಯಲ್ಲಿ ವಾದದಲ್ಲಿ ಪ್ರಾಣಪಣ ಒಡ್ಡಿ ತರ್ಕಮಾಡಿ ಶಾಕಲ್ಯಮುನಿಯ ಸಾವಿಗೆ ಕಾರಣನಾದ. ಬ್ರಹ್ಮವಿದ್ಯೆಯ ವಿಷಯವಾಗಿ ಜನಕರಾಜನೊಂದಿಗೆ ವಾದಮಾಡಿ ವಿಶೇಷವಾಗಿ ಮನ್ನಣೆಪಡೆದ. ವಿಶ್ವಾವಸು ಎಂಬ ಗಂಧರ್ವನೊಂದಿಗೆ ಸಂವಾದ ನಡೆಸಿದ. ಈತ ಬರೆದ ಸ್ಮøತಿ, ಯಾಜ್ಞವಲ್ಕ್ಯಸ್ಮøತಿ ಎಂದು ಹೆಸರಾಗಿದೆ. ಈತ ತನ್ನ ಜೀವನದ ಉತ್ತರಾರ್ಧದಲ್ಲಿ ಐಹಿಕ ಜೀವನ ಅರ್ಥಹೀನವೆಂದು ಬಗೆದು ಎಲ್ಲವನ್ನೂ ತ್ಯಜಿಸಿ ಕೊನೆಗೆ ಪರಿವ್ರಾಜಕನಾದ. ವಾಯು, ವಿಷ್ಣುಪುರಾಣಗಳಲ್ಲಿ ಮತ್ತು ಭಾರತ, ಭಾಗವತಗಳಲ್ಲಿ ಈತನ ಬಗ್ಗೆ ಪ್ರಸ್ತಾಪವಿದೆ.				
(ಕೆ.ವೈ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ